ಮಾಘ
ಕ್ರಿ.ಶ. 700. ಸಂಸ್ಕøತ ಕವಿ. ಶಿಶುಪಾಲವಧ ಎಂಬ ಕಾವ್ಯದ ಕರ್ತೃ. ದತ್ತಕ ಸರ್ವಾಚಾರ್ಯನ ಮಗ. ವರ್ಮಲಾತನ ಮಂತ್ರಿಯಾಗಿದ್ದ ಸುಪ್ರಭದೇವನ ಮೊಮ್ಮಗ. ಪ್ರಾಚೀನ ಅಲಂಕಾರಿಕರಾದ ಆನಂದವರ್ಧನ, ವಾಮನ ಮತ್ತು ಕವಿರಾಜಮಾರ್ಗದ ನೃಪತುಂಗ ಇವರೆಲ್ಲ ಮಾಘನನ್ನು ಶ್ರೇಷ್ಠ ಕವಿಯೆಂದು ತಿಳಿದಿದ್ದರು. ಕಾಲದಲ್ಲಿ ಇವರೆಲ್ಲರಿಗಿಂತ ಮಾಘ ಒಂದು ಶತಮಾನ ಹಿಂದಿನವರಾಗಿರಬೇಕೆಂಬುದು ಹಲವು ವಿದ್ವಾಂಸರ ಮತ. ಮಾಘ ಕವಿಗೆ ಜಿನೇಂದ್ರಬುದ್ಧಿಯ (ಕ್ರಿ.ಶ. 700) ನ್ಯಾಸ ತಿಳಿದಿರುವುದರಿಂದಲೂ ಭಾರವಿಯನ್ನೇ ಆದರ್ಶವಾಗಿಟ್ಟುಕೊಂಡಿರುವುದರಿಂದಲೂ ಅವನಿಗಿಂತ ಈಚಿನವನಾದುದರಿಂದಲೂ ಶ್ರೀಹರ್ಷನ ನಾಗಾನಂದ ನಾಟಕದ ಪರಿಚಯ ಇರುವುದರಿಂದಲೂ ಈ ಕವಿ ಕ್ರಿ.ಶ. 700ರಲ್ಲಿ ಜೀವಿಸಿದ್ದನೆಂದು ಅನೇಕ ವಿದ್ವಾಂಸರು ಭಾವಿಸಿರುತ್ತಾರೆ.

ವ್ಯಾಸ ಮಹಾಭಾರತೋಕ್ತ ಶಿಶುಪಾಲವಧೆಯ ಪ್ರಸಂಗ ಇಲ್ಲಿ ವಿಸ್ಥಾರವಾಗಿ ವರ್ಣಿತವಾಗಿದೆ. ಇದರಲ್ಲಿ 20 ಸರ್ಗಗಳಿವೆ. ಮಹಾಕಾವ್ಯದ ರೂಪ ಕೊಡಲು ಮಾಘ ಋತು ಮುಂತಾದವುಗಳ ವರ್ಣನೆಯನ್ನು ಸೇರಿಸಿದ್ದಾನೆ. ಕಥೆ ಆಹ್ಲಾದಕರವಾಗಿದೆ. ಅಲ್ಲಲ್ಲಿ ರಾಜನೀತಿಗೆ ಸಂಬಂಧಿಸಿದ ಸಿದ್ಧಾಂತಗಳ ವರ್ಣನೆ ಇದೆ. ಅಲಂಕಾರಗಳಲ್ಲಿ ನಾವೀನ್ಯ ಇದೆ. ಪ್ರಯಾಸ ಪೂರ್ವಕ ಶ್ಲೇಷಾಲಂಕಾರವನ್ನು ಪ್ರಯೋಗಿಸಿದ್ದಾನೆ. ಯಮಕ, ಅನುಲೋಮ, ಪ್ರತಿಲೋಮ, ಏಕಾಕ್ಷರ, ಸರ್ವತೋಭದ್ರ ಇತ್ಯಾದಿ ಚಿತ್ರಾಲಂಕಾರಗಳನ್ನು ಪ್ರಯೋಗಿಸಿ ತನ್ನ ಅಲಂಕಾರ ಪ್ರಿಯತೆಯನ್ನು ತೋರಿಸಿದ್ದಾನೆ.
ಶಿಶುಪಾಲವಧೆಯ ಕಥಾಸಾರ (ವಸ್ತು) ಹೀಗಿದೆ:

1. ನಾರದ ಮಹರ್ಷಿಗಳು ದ್ವಾರಕಾ ಪಟ್ಟಣಕ್ಕೆ ಬಂದು ದೇವತೆಗಳಿಗೂ ಮನುಷ್ಯರಿಗೂ ಶತ್ರುವಾದ ಶಿಶುಪಾಲನನ್ನು ವಧಿಸಬೇಕೆಂಬ ಇಂದ್ರನ ಸಂದೇಶವನ್ನು ಕೃಷ್ಣನಿಗೆ ಅರುಹುವುದು. 2. ಕೃಷ್ಣ, ಬಲರಾಮ, ಉದ್ಧವ ಇವರ ಮಂತ್ರಾಲೋಚನೆ. 3. ದ್ವಾರಕಾ ಪಟ್ಟಣದಿಂದ ಕೃಷ್ಣ ಹೊರಡುವುದು. ದ್ವಾರಕಾಪಟ್ಟಣ ಮತ್ತು ಸಮುದ್ರ ಇವುಗಳ ವರ್ಣನೆ. 4. ಕೃಷ್ಣನ ಸಾರಥಿದಾರುಕ ಸುಂದರವಾದ ರೈವತಕ ಪರ್ವತವನ್ನು ವರ್ಣಿಸುವುದು. 5. ಸೇನೆ ಬೀಡು ಬಿಡುವುದು, ವಿಹಾರ. 6. ಸ್ತ್ರೀಯರ ವಿಹಾರ, ಆರು ಋತುಗಳ ವರ್ಣನೆ. 7. ಯಾದವರು ಸುಂದರ ಸ್ತ್ರೀಯರೊಂದಿಗೆ ವನವಿಹಾರದಲ್ಲಿ ನಿರತರಾಗಿರುವುದು. 8. ಜಲ ವಿಹಾರ ವರ್ಣನೆ. 9. ಸೂರ್ಯಾಸ್ತಮಯ ವರ್ಣನೆ. 10. ಮದ್ಯಪಾನ ಮತ್ತು ಮದನಕೇಳಿ ವರ್ಣನೆ. 11. ಪ್ರಭಾತ ವರ್ಣನೆ. 12. ಸೈನಿಕರು ತಮ್ಮ ಕರ್ತವ್ಯವನ್ನು ನೆನೆದು ಯಮುನಾ ನದಿಯನ್ನು ದಾಟುವುದು. 13. ಇಂದ್ರಪ್ರಸ್ಥದಲ್ಲಿ ಕೃಷ್ಣ-ಯುಧಿಷ್ಠಿರರ ಮಿಲನ, ಯಜ್ಞಸಭೆ. 14. ಯಜ್ಞ ವರ್ಣನೆ. ಭೀಷ್ಮನ ಆದೇಶದಂತೆ ಯುಧಿಷ್ಠರ ಕೃಷ್ಣನಿಗೆ ಪ್ರಥಮಾಘ್ರ್ಯ ಸಲ್ಲಿಸುವುದು. 15. ಕ್ರುದ್ಧ ಶಿಶುಪಾಲನ ಉಗ್ರ ಪ್ರತಿಭಟನೆ, ಉದ್ಧಟ ವಾಕ್ಯಗಳು, ಸಭಾತ್ಯಾಗ, ಸೇನಾಸಿದ್ಧತೆ-ಶಿಶುಪಾಲನ ಸೈನ್ಯಕ್ಕೆ ಅಪಶಕುನಗಳು. 16. ಶಿಶುಪಾಲನ ಸಂದೇಶ ತಂದ ದೂತನಿಗೂ ಸಾತ್ಯಕಿಗೂ ವಾಗ್ಯುದ್ಧ. 17. ಎರಡೂ ಸೈನ್ಯಗಳು ಯುದ್ಧ ವರ್ಣನೆ. 20. ದ್ವಂದ್ವ ಯುದ್ಧ-ಶಿಶುಪಾಲ-ಕೃಷ್ಣ ಇವರ ಪರಸ್ಪರ ಅಸ್ತ್ರ ಪರಂಪರೆ-ಕೃಷ್ಣ ತನ್ನ ಸುದರ್ಶನ ಚಕ್ರದಿಂದ ಶಿಶುಪಾಲನ ಶಿರಸ್ಸು ಕತ್ತರಿಸುವುದು. ಶಿಶುಪಾಲನ ಶರೀರದಿಂದ ಹೊರಟ ತೇಜಸ್ಸು ಕೃಷ್ಣನಲ್ಲಿ ಲೀನವಾಗುವುದು. ಹರ್ಷಗೊಂಡ ದೇವತೆಗಳು ಪುಷ್ಪವೃಷ್ಟಿ ಗೈಯ್ಯುವುದು.

ಕಥೆ ಹೇಗೇ ಇರಲಿ, ಕಥನಕೌತುಕ ಮುಖ್ಯ. ಕವಿಯ ಚಮತ್ಕಾರ ನೋಡ ಬಯಸುವವರು ಮೂಲವನ್ನೇ ಓದಬೇಕು. ಶಿಶುಪಾಲ ವಧೆ ಸಂಸ್ಕøತದಲ್ಲಿ ಬೃಹತ್‍ತ್ರಯೀ ಎನ್ನಿಸಿಕೊಂಡಿರುವ ಮಹಾಕಾವ್ಯಗಳಲ್ಲೊಂದಾಗಿದೆ. ಕಾಳಿದಾಸನ ಉಪಮೆ, ಭಾರವಿಯ ಅರ್ಥಗೌರವ, ದಂಡಿಯ ಪದಲಾಲಿತ್ಯ-ಈ ಮೂರು ಗುಣಗಳೂ ಮಾಘನ ಕಾವ್ಯದಲ್ಲಿವೆಯೆಂದು ಪಂಡಿತರ ಅಭಿಪ್ರಾಯ. ಭಾರವಿಗಿಂತ ಮಾಘ ಹೆಚ್ಚಿನವ ಎನ್ನುವುದಕ್ಕೆ ಒಬ್ಬ ವಿಮರ್ಶಕ ಚಮತ್ಕಾರವಾಗಿ ಹೀಗೆ ಹೇಳಿದ್ದಾನೆ: ಎಲ್ಲಿಯವರೆಗೆ ಮಾಘ ಹುಟ್ಟಲಿಲ್ಲವೋ ಅಲ್ಲಿಯವರೆಗೇ ಭಾರವಿಯ ಬೆಳಕು. ಮಾಘ (ಮಾಸ) ಹುಟ್ಟಿದ ಮೇಲೆ ಆ ಬೆಳಕು ಚಳಿಗಾಲದ ಸೂರ್ಯನ ತಾಪದಂತೆ (ಚಳಿಗಾಲದಲ್ಲಿ ಸೂರ್ಯನ ಕಿರಣಗಳು ಅಷ್ಟು ತೇಜಸ್ಸಿನಿಂದ ಕೂಡಿರುವುದಿಲ್ಲ).

ಮಾಘನ ಶಬ್ದ ಸಂಪತ್ತು ಒಂದು ಅಕ್ಷಯ ಪಾತ್ರೆ. ಇವನ ಕಾವ್ಯದ ಒಂಬತ್ತು ಸರ್ಗಗಳನ್ನೋದಿದ ಮೇಲೆ ಬೇಕೆಂದರೂ ಹೊಸ ಪದ ಎಲ್ಲೂ ಸಿಗಲಾರದು ಎನ್ನುವ ಅರ್ಥ ಬರುವ `ನವಸರ್ಗಗತೇ ಮಾಘೇ ನವಶಬ್ದೇ ನವಿದ್ಯತೇ ಎಂಬ ಉಕ್ತಿ ಇದೆ. ತನ್ನ ಕಾವ್ಯದ ನಾಲ್ಕನೆಯ ಸರ್ಗದಲ್ಲಿ ರೈವತಕ ಪರ್ವತವನ್ನು ವರ್ಣಿಸುತ್ತ ಪರ್ವತದ ತುದಿಯಲ್ಲಿ ಒಂದೆಡೆ ಸೂರ್ಯ ಬಿಂಬ ಉದಯಿಸುತ್ತ ಬೇರೊಂದೆಡೆ ಚಂದ್ರ ಬಿಂಬ ಮುಳುಗುತ್ತ ಇರುವುದು ಎರಡೂ ಕಡೆ ಜೋಲಾಡುತ್ತಿರುವ ಘಂಟಾದ್ವಯದಿಂದ ಕೂಡಿದ ವಾರಣೇಂದ್ರ ಲೀಲೆಗೆ ಸಮವಾಗಿದೆ ಎಂದು ಹೇಳಿರುವುದರಿಂದ ಮಾಘನಿಗೆ ಘಂಟಾಮಾಘ ಎಂದು ಹೆಸರು ಬಂತು, ವಾತ್ಸಾಯನನ ಕಾಮಸೂತ್ರದ ಪೂರ್ಣಪರಿಚಯದಿಂದ ಕೆಲವು ಶೃಂಗಾರ ಚಿತ್ರಗಳನ್ನು ಕೊಟ್ಟು ಅಸಭ್ಯತೆಗೆ ಕಾರಣನಾಗಿದ್ದಾನೆಂದು ಕೆಲವರ ಅಭಿಪ್ರಾಯ. ಇದಕ್ಕಾಗಿಯೋ ಏನೋ ಕನ್ನಡದ ಗಾದೆ "ಮಾಘ ಓದಿ ಮಗ ಕೆಟ್ಟ" ಹುಟ್ಟಿರಬಹುದು.

ಮಾಘ ಕಿರಾತಾರ್ಜುನೀಯವನ್ನು ರಚಿಸಿದ ಭಾರವಿಯನ್ನೇ ಆದರ್ಶವಾಗಿಟ್ಟುಕೊಂಡು ಅವನನ್ನು ಪ್ರತಿಯೊಂದು ಅಂಶದಲ್ಲೂ ಮೀರಿಸಲು ಹವಣಿಸುತ್ತಾನೆ. 4ನೆಯ ಸರ್ಗದಲ್ಲಿ ತನಗಿರುವ ಛಂದಸ್ಸಿನ ಕುಶಲತೆ ತೋರಿದ್ದಾನೆ. ಭಾರವಿಯಲ್ಲಿ ಒಟ್ಟು 19 ವೃತ್ತಗಳಿದ್ದರೆ ಮಾಘನಲ್ಲಿ 23ನ್ನು ಕಾಣುತ್ತೇವೆ. ಭಾರವಿ ಶಿವನನ್ನು ಸ್ತುತಿಸಿದರೆ ಮಾಘ ವಿಷ್ಣುವನ್ನು ಸ್ತುತಿಸುತ್ತಾನೆ. ಕಥಾ ಭಾಗಕ್ಕೆ ಇಬ್ಬರಿಗೂ ಒಂದೇ ಮೂಲ. ಇಬ್ಬರೂ ಶ್ರೀಯಃ ಎಂಬ ಪದದಿಂದಲೇ ಕಾವ್ಯಾರಂಭ ಮಾಡುತ್ತಾರೆ. ಭಾರವಿ ಸರ್ಗಾಂತ್ಯದಲ್ಲಿ ಲಕ್ಷ್ಮೀ ಶಬ್ದ ತಂದರೆ, ಮಾಘ ಅಲ್ಲಿ ಶ್ರೀ ಶಬ್ದ ತರುತ್ತಾನೆ.

ಮಾಘನ ವಿದ್ವತ್ತು ಅಪಾರವಾದುದು. ಚತುರ್ದಶ ವಿದ್ಯೆಯಲ್ಲೂ ನಿಷ್ಣಾತ, ಅಶ್ವಶಾಸ್ತ್ರ, ಗಜಶಾಸ್ತ್ರ, ಬೌದ್ಧಸಿದ್ಧಾಂತ, ಸಾಂಖ್ಯ, ಸಂಗೀತ, ಇತರ ದರ್ಶನಗಳು, ನಾಟ್ಯ, ಕಾಮಶಾಸ್ತ್ರ, ನೀತಿ, ಅರ್ಥ, ವ್ಯಾಕರಣ ಈ ಶಾಸ್ತ್ರಗಳಲ್ಲೆಲ್ಲ ಆಳವಾದ ಪರಿಚಯವಿರುವುದರಿಂದ ಭಾರತೀಯ ಶಾಸ್ತ್ರಪ್ರಿಯ ಪಂಡಿತರು ಇವನನ್ನೇ ಮೆಚ್ಚಿಕೊಂಡರು. ಈತನ ಕಾವ್ಯದಲ್ಲಿ 19ನೆಯ ಸರ್ಗದಲ್ಲಿ ಬರುವ ಯಮಕಗಳು. ಬಂಧಗಳು ಮುಂತಾದ ಭಾಷೆಯ ಕಸರತ್ತುಗಳು ಎಲ್ಲರಿಗೂ ಹಿಡಿಸಿಲ್ಲ. ಶೃಂಗಾರ ಚಿತ್ರಗಳನ್ನು ಪಾಶ್ಚಾತ್ಯರು ಮೆಚ್ಚಿಲ್ಲ-ಭಾರತೀಯರು ತೆಗಳಿಲ್ಲ. ಕಾವ್ಯ ರಚನಾ ಸಾಮಥ್ರ್ಯದಲ್ಲಿ ಮಾಘ ನಿಪುಣ. ಅರ್ಥಗಾಂಭೀರ್ಯವನ್ನೂ ಶಬ್ದಾರ್ಥಗಳ ಸಮುಚಿತ ಸಾಹಚರ್ಯೆಯನ್ನೂ ನೀತಿಯ ಸ್ವಾಭಾವಿಕ ಮೇಲ್ಮೈಯನ್ನೂ ಇತರ ಮಹಾಕವಿಗಳಂತೆಯೇ ಈತ ಚಿತ್ರಿಸಬಲ್ಲ. ಅಲಂಕಾರಗಳನ್ನು ಒಂದರ ಮೇಲೊಂದರಂತೆ ಕೊಡಬಲ್ಲ. ಅನುಪ್ರಾಸಗಳು ಶಕ್ತಿಯುಕ್ತವೂ ಚಮತ್ಕಾರಪೂರ್ಣವೂ ಅರ್ಥಯುಕ್ತವೂ ಆಗಿವೆ. ಕೆಲವು ಚಿತ್ರಗಳಂತೂ ತುಂಬ ಸುಂದರವಾಗಿವೆ. ಯುದ್ಧಕ್ಕೆ ಸಿದ್ಧವಾದ ಸೈನ್ಯಗಳ ಕೋಲಾಹಲ, ಕೃಷ್ಣನಿಗೆ ದೊರಕಿದ ಅಗ್ರಪೂಜೆಯನ್ನು ನೋಡಿ ಉಗ್ರನಾಗಿ ಪ್ರತಿಭಟಿಸಿದ ಶಿಶುಪಾಲನ ಚಿತ್ರ, ಕೃಷ್ಣ, ಬಲರಾಮ ಮತ್ತು ಉದ್ಧವ ಇವರ ಮಂತ್ರಾಲೋಚನಾ ಸಭೆ-ಇವೆಲ್ಲ ಮನೋಜ್ಞವಾಗಿವೆ.	 
 (ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ